ಇಸ್ಲಾಂ ಷಾ
1545-53. ಷೇರ್ ಷಾನ ಮಗ. ತಂದೆಯ ಮರಣಾನಂತರ (1545) ಪಟ್ಟಕ್ಕೆ ಬಂದ. ಹುಟ್ಟು ಹೆಸರು ಜಲಾಲ್. ಇಸ್ಲಾಂ ಷಾ ಎಂಬುದು ಹೊಸ ಹೆಸರು. ಸಲೀಂ ಷಾ ಎಂಬುದು ಬಿರುದು. ಈತ ರಾಜ್ಯದಲ್ಲಿ ಅನೇಕ ಸುಧಾರಣಾ ಕೆಲಸಗಳನ್ನು ಕೈಗೊಂಡ. ದೇಶದ ಭದ್ರತೆಗೆ ಸೈನ್ಯವೇ ಬೆನ್ನುಮೂಳೆಯೆಂದು ಅರಿತು ಸಿಂಹಾನವನ್ನೇರಿದ ಕೆಲದಿನಗಳಲ್ಲಿ ಪ್ರತಿಯೊಬ್ಬ ಸೈನಿಕನಿಗೂ ಎರಡು ತಿಂಗಳ ಸಂಬಳವನ್ನು ಪುಕ್ಕಟೆಯಾಗಿ ಕೊಟ್ಟ. ಮಾಲೀಕರಿಗೆ ಪರಿಹಾರ ದ್ರವ್ಯವನ್ನು ಕೊಟ್ಟು. ಜಹಗೀರು ಜಮೀನುಗಳನ್ನು ವಶಪಡಿಸಿಕೊಂಡ. ದೇಶದ ಶಾಂತಿಯನ್ನು ಕದಡಿದ ಕಾಲಿಂಜರ್ ದೊರೆಯನ್ನು ನಿರ್ನಾಮ ಮಾಡಿದ. ಪ್ರವಾಸಿಗಳಿಗೆ ಹೆಚ್ಚಿನ ಸೌಕರ್ಯಗಳನ್ನೊದಗಿಸಿದ. ಸರಾಯ್ ಎಂಬ ವಿಶ್ರಾಂತಿಗೃಹಗಳನ್ನು ಕಟ್ಟಿಸಿ, ಬಡಬಗ್ಗರಿಗೆ ಅನ್ನದಾನ ನಡೆಯುವಂತೆ ಏರ್ಪಾಡು ಮಾಡಿದ. ಹಿಂದೂ ಮುಸ್ಲಿಮರ ನಡುವೆ ಯಾವ ತಾರತಮ್ಯವನ್ನೂ ತೋರುತ್ತಿರಲಿಲ್ಲ. ಸಿವಿಲ್ ಮತ್ತು ಸೈನಿಕ ಅಧಿಕಾರಿಗಳ ಮಾರ್ಗದರ್ಶನಕ್ಕಾಗಿ ಕಾಯಿದೆಗಳನ್ನು ಹೊಸದಾಗಿ ರೂಪಿಸಿ ಅವನ್ನು ಚಾಚೂ ತಪ್ಪದೆ ಕಾರ್ಯಗತಮಾಡಬೇಕೆಂದು ಅಧಿಕಾರಿಗಳಿಗೆ ಆಜ್ಞೆ ಇತ್ತು. ಅವರಲ್ಲಿ ಶಿಸ್ತುಪ್ರಧಾನವಾಗಿರುವಂತೆ ಕ್ರಮ ಕೈಗೊಂಡ. ದೇಶದಾದ್ಯಂತ ಗೂಢಾಚಾರರನ್ನು ನೇಮಕಮಾಡಿ ಅವರ ಮೂಲಕವಾಗಿ ದೇಶದಲ್ಲಿ ನಡೆಯುವ ಘಟನೆಗಳ ಬಗ್ಗೆ ವರ್ತಮಾನವನ್ನು ತಿಳಿಯುತ್ತಿದ್ದ. ಅಪರಾಧಿಗಳನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುತ್ತಿದ್ದ. ದೇಶದ ವಿವಿಧ ಭಾಗಗಳಲ್ಲಿ ಶಿಬಿರಗಳನ್ನೇರ್ಪಡಿಸಿ, ಅವುಗಳಲ್ಲಿ ಸೈನ್ಯವನ್ನಿಟ್ಟ. ಆಗಾಗ ತಾನೇ ಶಿಬಿರಗಳಿಗೆ ಭೇಟಿ ಕೊಡುತ್ತಿದ್ದ. ನ್ಯಾಯ ತೀರ್ಮಾನದ ಕೆಲಸ ಸಾಮಾನ್ಯವಾಗಿ ಶುಕ್ರವಾರ ನಡೆಯುತ್ತಿತ್ತು.

	ಶಕ್ತಿ ಮತ್ತು ಸಾಮಥ್ರ್ಯಗಳಿದ್ದರೂ ಸ್ವಾಭಾವಿಕವಾಗಿ ಈತ ಇನ್ನೊಬ್ಬರನ್ನು ಸಂಶಯದೃಷ್ಟಿಯಿಂದಲೇ ನೋಡುತ್ತಿದ್ದ. ತನ್ನ ತಂದೆಯನ್ನು ದೇವರೆಂದು ಪೂಜಿಸುತ್ತಿದ್ದ. ಶ್ರೀಮಂತರ ಪ್ರೀತ್ಯಾದರಗಳನ್ನು ಈತ ಸಂಪಾದಿಸಲಿಲ್ಲ. ತತ್ಪರಿಣಾಮವಾಗಿ ಷೇರ್ ಷಾನ ಉತ್ಕರ್ಷಕ್ಕೆ ಕಾರಣರಾದ ಆಘ್ಘನ್ ಶ್ರೀಮಂತರು ಇಸ್ಲಾಂ ಷಾನನ್ನು ಬಿಟ್ಟು ಹೊರಡಲುಪಕ್ರಮಿಸಿದರು. ಇದರಿಂದ ದೇಶದ ಭದ್ರತೆ ಕಡಿಮೆಯಾಗಿ ಅಂತ್ಯದಲ್ಲಿ ಸಾಮ್ರಾಜ್ಯ ಒಡೆದುಹೋಗಲು ಅವಕಾಶ ಮಾಡಿಕೊಟ್ಟಿತು.

	ಇಸ್ಲಾಂ ಷಾನನ್ನು ಕೊಲೆಮಾಡಲು ಆಘ್ಘನ್ ಶ್ರೀಮಂತರೂ ಸಹೋದರನಾದ ಆದಿಲ್‍ಖಾನನು ಗುಟ್ಟಾಗಿಯೇ ಪಿತೂರಿಯನ್ನು ನಡೆಸಿದರು. ಆದರೆ ಅದು ಜಯಪ್ರದವಾಗಲಿಲ್ಲ. ಒಳಸಂಚಿನಲ್ಲಿ ಕೈವಾಡವಿದ್ದ ಖವಾಸ್‍ಖಾನನನ್ನು ಸೋಲಿಸಲಾಯಿತು. ಆದಿಲ್‍ಖಾನ್ ತಲೆಮರೆಸಿಕೊಂಡು ಓಡಿಹೋದ. ಶಂಕಿಸಲಾದವರನ್ನು ಉಗ್ರಶಿಕ್ಷೆಗೆ ಗುರಿಮಾಡಲಾಯಿತು.

	ಪ್ರಮುಖ ಹುದ್ದೆಗಳಲ್ಲಿನ ಎಲ್ಲ ಆಘ್ಘನ್ ಶ್ರೀಮಂತರನ್ನೂ ಷಾ ತೆಗೆಯಲಾರಂಭಿಸಿದ. ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಧನಮದದಿಂದ ಕೊಬ್ಬಿದ್ದಾನೆಂಬ ಕಾರಣದ ಮೇಲೆ ಷೇರ್‍ಷಾನಿಂದ ನೇಮಕಗೊಂಡು ಮಾಳ್ವ ಪ್ರಾಂತ್ಯದ ಅಧಿಕಾರಿಯಾದ ಶುಜಾತ್‍ಖಾನನನ್ನು ಅಧಿಕಾರದಿಂದ ಉರುಳಿಸಲು ಷಾ ಪ್ರಯತ್ನಿಸಿದ. ಅಷ್ಟರಲ್ಲಿ ಆತ ತನ್ನ ರಾಜನಿಷ್ಠೆಯನ್ನು ತೋರಿ ತನ್ನ ಸ್ಥಾನಮಾನಗಳನ್ನು ಉಳಿಸಿಕೊಂಡ. ಪಂಜಾಬಿನ ಆಡಳಿತಾಧಿಕಾರಿಯಾದ ಹಯಬತ್‍ಖಾನ್ ನಿಯಾಜಿ ಅಜಿಂ ಹುಮಾಯುನ್ ತನ್ನ ಬಗ್ಗೆ ರಾಜನಿದ್ದ ಸಂಶಯವನ್ನು ತೊಡೆದುಹಾಕಲು ಯಾವ ಪ್ರಯತ್ನವನ್ನೂ ಮಾಡಲಿಲ್ಲ. ತತ್ಪರಿಣಾಮವಾಗಿ ಇಬ್ಬರಿಗೂ ಸಮರವೇರ್ಪಟ್ಟಿತು. ಖವಾಸ್‍ಖಾನ್ ಪಂಜಾಬಿನ ಆಡಳಿತಾಧಿಕಾರಿಗೆ ಸಹಾಯ ನೀಡಿದ. ವಿರೋಧ ವಿಷಮವಾಗಿಯೇ ಕಂಡಿತು. ಆದರೆ ಅವರಿಬ್ಬರಲ್ಲೂ ವ್ಯೆಮನಸ್ಯವುಂಟಾಗಲಾಗಿ ಇಸ್ಲಾಂ ಷಾನ ಕೆಲಸ ಸುಲಭವಾಯಿತು. ರಣಭೂಮಿಯಲ್ಲಿ ಇಬ್ಬರೂ ಸೋತು ಓಡಿದರು. ಅವರ ಬಗ್ಗೆ ಎಚ್ವರಿಕೆ ವಹಿಸಿದುದರಿಂದ ಇಸ್ಲಾಂ ಷಾಗೆ ಅವರಿಂದ ಯಾವ ತೊಂದರೆಯೂ ಆಗಲಿಲ್ಲ.

	ಕಾಶ್ಮೀರದ ದೊರೆಯಾದ ಮಿರ್ಜಾಹೈದರ್‍ನೊಂದಿಗೆ ಷಾ ಸ್ನೇಹಸಂಬಂಧವನ್ನಿಟ್ಟುಕೊಂಡಿದ್ದ. ಮೈತ್ರಿಯ e್ಞÁಪಕಾರ್ಥವಾಗಿ ಹೈದರ್ ದೆಹಲಿಯ ಆಸ್ಥಾನಕ್ಕೆ ತನ್ನ ವಕೀಲನನ್ನು ಉಡುಗೊರೆಗಳೊಡನೆ ಕಳುಹಿಸಿಕೊಟ್ಟ..

	ಇಸ್ಲಾಂ ಷಾನ ಆಡಳಿತ ಪ್ರಧಾನವಾಗಿ ವೈಯಕ್ತಿಕವಾಗಿತ್ತು. ಹಲವಾರು ವಿಷಯಗಳಲ್ಲಿ ಈತ ತಂದೆಯಂತೆಯೇ ನಡೆದುಕೊಂಡರೂ ಆಘ್ಘನ್ ಶ್ರೀಮಂತರ ಬೆಂಬಲವನ್ನು ಕಳೆದುಕೊಂಡದ್ದು ಇವನಿಗೆ ಒಂದು ದೊಡ್ಡ ಆಘಾತವಾಗಿ ಪರಿಣಮಿಸಿತು. ತನ್ನ ಅಮಾನುಷ ಕೃತ್ಯದಿಂದಲೂ ನಿಷ್ಠುರ ನುಡಿಗಳಿಂದಲೂ ಈತ ಜನತೆಯ ಗೌರವವನ್ನು ಕಳೆದುಕೊಂಡ. ಇವನ ಕಟ್ಟುನಿಟ್ಟಾದ ನೀತಿಯಿಂದ ಆಘ್ಘನ್ನರಲ್ಲಿದ್ದ ರಾಷ್ಟ್ರೀಯ ಒಕ್ಕೂಟ ಒಡೆಯಿತು. ಪರಿಣಾಮವಾಗಿ ಇವನ ಮರಣಾನಂತರ ಆಘ್ಘನ್ ಸಾಮ್ರಾಜ್ಯ ಪತನಗೊಂಡಿತು.											
(ಬಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ